ಆಡು ಭಾಷೆಯ ಸೊಗಡು – ಕುಂದಾಪುರ ಕನ್ನಡ

ಕಥಿ ಹೈಲ್ ಅಯ್ತಲ್ಲ ಮರಾಯ್ರೆ

೧. ಮನಿ ಲೆಕ್ಕ


“ಮಾಣಿ  ಇಗಾ ಸಿದ್ಧಿಯ ಮನಿಗ್ ಹೋಯಿ ಒಂದ್ ಸೊಲ್ಗಿ ಹಾಲ್ ತಕಂಡ್ ಬಾ ಕಾಂಬೊ. ಬೆಳ್ಗಿಂದ ತಲಿ ತಿರ್ಗ್ತಾ ಇತ್ತ್ ಮರಾಯಾ, ಈಗ ಚಾಯಿ ಕುಡೀದಿದ್ರೆ  ಅತೇ ಇಲ್ಲೆ.”
ಎಂದರು ಚಿಕ್ಕಮ್ಮ, ಅವರಿಗೂ ಬೆಳಗಿಂದ ಅಗಿ ಸಸಿ ನಟ್ಟೂ ನಟ್ಟೂ ಸಾಕಾಗಿತ್ತು.
“ನಂಗ್ಯಡಿಯ, ಆ ಜಿರಾಪತಿ ಮಳೆಯಲ್ಲ್ ಅಲ್ಲಿಗೋಪುಕೆ ನಂಕೈಲಾಪುದಿಲ್ಲೆ, ನಂಗೆ ಶಾಲಿ ಮಾಸ್ಟ್ರ ಕೊಟ್ಟ ಮನಿ ಲೆಕ್ಕ ಮಾಡುಕಿತ್ತ.” ಅಂದ ಅವರ ಮಾಣಿ.
“ನೀ ಕಲ್ತ್ ಗುಡ್ಡಿ ಹಾಕೂದ್ ನಂಗೊತ್ತಿಲ್ಯಾ, ಹಳ್ಳೀ ಜಬ್ಬ! ಹನ್ನ್ರ್ಡೇಳ್ಲ್ ಹೇಳೂಕಾತಿಲ್ಲೆ, ಕಲಿತ್ತ ಅಂಬ್ರು ಕಲಿತ್ತ!!!” ಚಿಕ್ಕಮ್ಮ ಕನಲಿದಳು.
” ನಂಗ್ಯಾಕ್ ಗೊತ್ತಿಲ್ಲೆ, ಈಗ ಮಾಡಿ ತೊರಿಸ್ತೆ ಕಾಣಿ, ಇಗಾ ಹನ್ನ್ರ್ಡೇಳ್ಲ್  ಅಲ್ದಾ ? ಏಳೊಂದ್ಲಿ ಏಳ, ಏಳೆರ್ಡ್ಲಿ ಹದ್ನಾಲ್ಕ, ಅಂದ್ರೆ ಏಳ್ನೂರಾ ಹದ್ನಾಲ್ಕು, ಕಂಡ್ರ್ಯಾ?”
ಸೈ ನೀನ್ ಉದ್ಧಾರ ಆದ ಹಾಗೇ ಬಿಡ್, ಸರಿ ಹಂಗಾರೆ ಅದೇ ಹನ್ನೆರಡನ್ನ ಏಳ್ ಸಲಿ ಬರ್ದ್ ಕೂಡ್ಸ್ ಕಾಂಬೋ, ಈಗ್ಲೂ ಅದೇ ಉತ್ತರ ಬಂದ್ರೆ ನೀನ್ ಹೇಳೂದ್ ಸರಿ ಅಂತ್ ಲೆಕ್ಕ”
ಅದಕ್ಕೇನಂಬ್ರು ಈಗ ಕೂಡ್ಸ್ತೆ ಕಾಣಿ ಹನ್ನೆರಡನ್ನ   ಏಳ್ ಸಾರಿ ಒಂದರ್ ಕೆಳ್ಗೆ ಒಂದ್ ಬರ್ದೆ, ಈಗ ಕಾಣಿ, ಒಂದನ್ನ ಏಳ್ ಸಲಿ ಕೂಡ್ಸ್ ದ್ರೆ ಏಳು, ಕಡಿಗೆ ಎರ್ಡನ್ನ ಏಳ್ ಸಲಿ ಕೂಡ್ಸ್ದ್ರೆ ಹದ್ನಾಲ್ಕು. ಅಂದ್ರೆ ಏಳ್ನೂರಾ ಹದ್ನಾಕು! ಸರೀ ಅಯ್ತಲ್ಲೆ!!

ಕ್ಲಪ್ತ ಸಮಯದಲ್ಲಿ ಜಾಸ್ತಿ ಆವರಿಸಿಕೊಳ್ಳುವ ಭಾಷೆಯೇ ನಮ್ಮ  ಈ ಕುಂದಾಪುರ ಕನ್ನಡ. ಉಪಯೋಗಿಸಿ, ಉಪಯೋಗಿಸಿ, ಸವೆದು ಸಣ್ಣ( ಸುಣ್ಣ ಅಲ್ಲ) ಹೃಸ್ವ..ವಾಗಿ ತನ್ನದೇ ಪರಿಮಳ ಬೀರುವ ಬಾಷೆಯಿದು, ಕುಂದಾಪ್ರ ಕಡೆಯರಾದ್ರೆ ಮಾತ್ರ ನಿರರ್ಗಳವಾಗಿ ಉದುರುವ ನುಡಿಗಳು ಬೆಂಗಳೂರು ಮಂಗಳೂರು ಕಡೆಯವರ ಹತ್ರಕುಂಡೀ ಕಾಲ್ ಕೊಟ್ಟ ಪದ್ರಡ್.

೨..ಮರನ್ನ  ಅಲ್ಲಾಡ್ಸುದು


ಏಯ್ ಸೀನಾ!!???!!
“ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!
ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?”

ಮಂಜ್ರು ತಮ್ಮ ಕಚ್ಚೆ ಸರಿ ಮಾಡ್ತಾ ಕೇಳಿದರು, ಕುಡ್ದು ಕೆರಿ ಬದಿ ಗೋಳಿ ಮರ್ದ್  ಕೆಳಗೆ ಮಲಗಿಕೊಂಡಿರೋ ಸೀನನ್ನ.

“ಹೋಯ್ಮಂಜರೇ ನಮಸ್ಕಾರ!  ನಿವೇನ್ ಅಂದ್ಕಂಡ್ರಿ ಮರಾಯ್ರೆ?, ” ಸೀನ
ಇದೇನ್ ಸಾಧಾರ್ಣ್ ಮದ್ದ ಅಂದ್ಕಂಡ್ರ್ಯಾ!! ಇದ್ ಅಂತಿಂತದ್ದ ಅಲ್ಲ ಮರಾಯ್ರೆ, ದೇವ್ತೆಗಳೇ ಕುಡೀತಿದ್ರಂಬ್ರಲೇ?”

ಆದೆಲ್ಲಾ ನಿನ್ನ ತಲಿಯಲ್ ಯಾರ್ ತುಂಬ್ರ ಮರಾಯಾ!! ತಕ ಹೋತತ್ತ್ ನಿಂಗೆ, ಅದೇ ಬೆರೆ, ನಿನ್ ಇದೇ ಬೇರೆ!!!” ಮಂಜರೆಂದರು.

ಹಂಗರೆ ಒಂದ್ ಕೆಲ್ಸ ಮಾಡುವಾ, ನೀವ್ ನಿಮ್ಮ್ ಎಲ್ಲಾ ಪೂಜಿ ಪುನಸ್ಕಾರ ಮಾಡ್ದ್ ಶಕ್ತಿ ತಕಂಡ್ ಈ ಮರ ಅಲ್ಲಾಡ್ಸುಕಾತ್ತಾ ಕಾಣಿ !! ನಿಮಗ್ ಆತಿಲ್ಯಾ, ಹಾಂಗಾರೆ ಎಳ್ಜಬಿ ಮಾಡ್ಬೇಡಿ, ನನ್ನೊಟ್ಟಿಗೇ ಕೂತ್ಕಂಡ್ ನಾಕುಡೂದ್ನ ಕುಡ್ಕಂಡ್ ಈ ಮರ ಅಲ್ಲಾಡುದ್ ಇಬ್ಬರೂ ಕಾಂಬ ಬನಿ.

೩.  ಹ್ಞಾ !! ನಂಗಿಲ್ಯಾ!!!???

“ಚಿಕ್ಕಮ್ಮ, ಚಿಕ್ಕಮ್ಮ, ನೀವ್ ಸಣ್ಣಿಪ್ಪತ್ತಿಗೆ ಮಂಗ ನಿಮ್ಗ್ ಹೊಡಿತಮ್ರಲ್ಲೇ, ಹಂಗಾರೆ ಎಂತಕೆ ಹೊಡಿತ್ ಮಂಗ ನಿಮ್ಗೆ?”
“ಅದ್ಯಾರ್ ಹೇಳ್ರಾ ನಿಂಗೀಗ?” ಸ್ವಲ್ಪ ನಾಚಿಕೊಂಡ ಚಿಕ್ಕಮ್ಮನ ನೆನಪು ಆಗಲೇ ಬಾಲ್ಯಕ್ಕೆ ಇಳಿದಾಗಿತ್ತು.”ಹೌದು ಆ ಸಂಜೆ ನಾನು ನಿನ್ನಮ್ಮ ಸಾಯಂಕಾಲ ಮನೆಗೆ ಬರ್ತಾ  ಇದ್ದೊ. ನಮ್ಮ ಕೆರಿ ದಂಡೆಲಿ ಆಗ ಒಂದ್ ದೊಡ್ಡ ಗೋಳಿ ಮರ ಇದ್ದಿತ್ತ್. ನಾವೆಲ್ಲ ಅದೇ ಮರದಗೆ ಜೋಕಾಲಿ ಆಡುತ್ತಿತ್ತ್. ಅವತ್ತ ಅದ್ರಾಗೆ ಒಂದ್ ಚಣ್ಣ ಮರಿ ಮಂಗ ಆಡ್ಕಂದ್ ಇದ್ದಿತ್ತ್. ನಾನ ಅದನ್ನ್ ಕಂಡ್ ಖುಶಿ ಆಯಿ ಅದ್ರ ಹತ್ತರ ಹೋದೆ ಎತ್ಕಂಬುಕೆ. ಅದೆಲ್ಲಿತ್ತೊ ಅದ್ರ ಅಬ್ಬಿ ಬಂದ್ಕಂಡ್ ನನ್ನ ಕೆನ್ನಿಗೆ ಚಟಾರ್ ಅಂತ ತಪರಾಕಿ ಕೊಡ್ತ. ನಿನ್ನಮ್ಮ ನಾನ್ ಮರ್ಕಂಡ್, ಮರ್ಕಂಡ್, ಮನಿಗೆ ಬಂತ್.”

“ಹಂಗಾರೆ  ನಂಗ್ಯಂತ ಅಂತದ್ದ್  ಆಯಿಲ್ಯ ಚಿಕ್ಕಮ್ಮ?” ಮಾಣಿ ಕೇಳಿದ ಕುತೂಹಲದಲ್ಲಿ. ಸ್ವಲ್ಪ ಯೋಚಿಸಿದ  ಚಿಕ್ಕಮ್ಮ ಗಲಗಲನೆ ನಗುತ್ತಾ ಅಂದರು  “ನಂಗಿಲ್ಯಾ?”
“ಎಂತ?” ಮಾಣಿ ಉವಾಚ.
“ಸಣ್ಣಿಪ್ಪತ್ತಿಗೆ ನೀನ್ ಗುಂಡ್ ಗುಂಡಗೆ ಚಂದ ಇದ್ದೆ, ಎಲ್ರಿಗೂ ನೀನಂದ್ರ್ ಸೈ.ಅದಕ್ಕೆ ಮನೇಲ್ ಎಂತ ಮಾಡ್ದ್ರೂ, ಎಲ್ಲರೂ ನಿಂಗ್ ಪಾಲ್ ಕೊಡ್ತಿದ್ದ್ರ್.
ಸಣ್ಣಿಪ್ಪತ್ತಿಗೆ ನಮಗೆಲ್ಲ ಗುಡ್ಡಿಗೆ ಹೋಪುಕೆ ಈಗಿನ್ ಕಂಡಂಗೆ ಪಾಯಿಖಾನೆ ಇರ್ಲಿಲ್ಲೆ, ಚಂಬ್ ತಕಂಡ  ಎಲ್ಲ ಗದ್ದಿ ಬೈಲಿಗೋ ಅಲ್ದಿರ್ ಹಾಡಿಗೋ ಹೋಗ್ತಿತ್. ಆ ದಿನ ನೀನು ಚಿಕ್ಕಪ್ಪೈನೊಟ್ಟಿಗೆ ಬೈಲಿಗ್ ಹೊಯ್ದೆ ಅಂಬ್ರು. ಚಿಕ್ಕಪೈಯ್ಯ ಗುಡ್ಡಿಗೋಯಿ ಬಪ್ಪತ್ತಿಗೆ ಒಂದ್ ನಾಯಿ ಬಂದ್ ಅದನ್ನ ತಿಂತ್ ಅಂಬ್ರ. ಅದ್ ಪೂರ್ತಿ ತಿಂದಾರ ಮೇಲೆ ನೀನ್ ಅದನ್ನ  ಖಾಲಿ ಮಾಡ್ದ್ ಕಂಡ್ಕಂಡ್
ಹ್ಞಾ ನಂಗಿಲ್ಯಾ ಅಂದ್ಯಂಬ್ರು. ಎಲ್ಲರೂ ಅದನ್ನ ಇಗ್ಲೂ ನೆನ್ಪ್ ಮಾಡ್ಕಂಡ್,  ನೆನ್ಪ್ ಮಾಡ್ಕಂಡ್  ನಗ್ಯಾಡ್ತರ ಕಾಣ್”

Advertisements

ಅಡಿಪಾಯದಲ್ಲಿನ ಅಪಾಯ!!!

ಜೋಶಿಯವರು ನನ್ನನ್ನು ಕರೆದು ಹೊಸದೊಂದು ಕೆಲಸ ಬಂದಿದೆ ನೋಡಿಕೊಳ್ಳುತ್ತೀರಾ ಎಂದು ಕೇಳಿದಾಗ, ೩-೪ ತಿಂಗಳು ರಜೆಯ ಮಜದಲ್ಲಿದ್ದ ನನಗೆ ಒಂದು ಬದಲಾವಣೆ ಬೇಕೆನ್ನಿಸಿದ್ದು ಕೂಡಲೇ ಒಪ್ಪಿಕೊಂಡೆ.
ಅದೊಂದು ಐದು ಅಂತಸ್ತು ಗಳ ಬಹು ಮಹಡಿಯ ಕಟ್ಟೋಣದ ಪ್ರೊಜೆಕ್ಟ್ ಆಗಿದ್ದು,, ಮೇಲಿನ ಮಹಡಿಯಲ್ಲಿ ಈಜುಕೊಳವಿತ್ತು. ನನಗೂ ಈ ಹೊಸ ಕೆಲಸದಲ್ಲಿ ಮನಸ್ಸುಒಗ್ಗಿತು.

ಮನೆಯಿಂದ ಸುಮಾರು ೭-೮ ಕಿ ಮೀ ದೂರವಿದ್ದುದರಿಂದ ಸಹಜವಾಗಿಯೆನನ್ನ ಮೊದಲಿನ ಎರಡೂ ಕೆಲಸಗಳು ಮನೆಯಿಂದ ತುಂಬಾ ದೂರದಲ್ಲಿದ್ದರಿಂದ ಈ ಕೆಲಸ ನನಗೆ ತ್ರಪ್ತಿದಾಯಕವಾಗಿ ಕಂಡಿತು.

ಮೊದಲ ಭೂ ವರದಿಯಲ್ಲಿ ಕೆಲಸವನ್ನು ಮಳೆಗಾಲದ ನಂತರ ಆರಂಭ ಮಾಡಿದರೆ ಒಳ್ಳೆಯದು ಎಂತ ಇತ್ತು. ಆದರೆ ನಮ್ಮ ಕ್ಲೈನ್ಟ್ ತುಂಬಾನೇ ಆತುರದಲ್ಲಿದ್ದುದರಿಂದ ಕೆಲಸವನ್ನು ಆಗಸ್ಟ್ ತಿಂಗಳಲ್ಲಿಯೇ ಆರಂಭಿಸಿದೆವು.
ಮೂರ್ನಾಲ್ಕು ದಿನಗಳಲ್ಲಿ ವರದಿಯ ಸತ್ಯಾಂಶದ  ಅರಿವಾಯಿತು. ಆಗಲೇ ನೆಲದಡಿಯ ನೀರಿನ ಮಹಿಮೆ. ನಮಗೆ ನಾಲ್ಕೂವರೆ ಐದು ಮೀಟರ್ ನೆಲ ಅಗೆಯಬೇಕಾಗಿತ್ತು. ಆದರೆ ಒಂದು ಮೀಟರು ಅಗೆಯುವದರಲ್ಲಿಯೇ ನೀರಿನ ಒರತೆಯಿಂದಾಗಿ ನಮ್ಮ ಆನೆಯ ಬಲದ ಯಂತ್ರವೇ ಹಿಂದಡಿಯಿಡುತ್ತಿತ್ತು. ನೀರಿನ ಒರತೆಯಿಂದಾಗಿ ಪಕ್ಕದ ಮಣ್ಣೂ ಕೂಡಾ ಒಳಗಡೆಯೇ ಬಿದ್ದು ಇನ್ನೂ ತೊಂದರೆಯುಂಟು ಮಾಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚು ತೊಂದರೆಯಾದುದು, ನಮ್ಮ ಜಾಗದ ಪಕ್ಕದಲ್ಲಿಯೇ ತಲೆಯೆತ್ತಿ ನಿಂತ ಅಪಾರ್ಟ್ಮೆಂಟ್ ಕಡೆಯ ಮಣ್ಣೂ ಬೀಳಲು ಆರಂಭಿಸಿದಾಗ.
ನಮಗೂ ದಿಗಿಲಾಯಿತು, ಅವರಿಗೂ….

ಈಗಂತೂ ಇದಕ್ಕೊಂದು ಪರಿಹಾರಕಂಡುಕೊಳ್ಳಲೇ ಬೇಕಾಗಿತ್ತು!!! ಯಾಕೆಂದರೆ ಹಾಗೇ ಬಿಟ್ಟರೆ ಈ ಅಪಾಯ ಅವರ ಅಡಿಪಾಯವನ್ನು ದುರ್ಬಲವನ್ನಾಗಿಸಿದರೆ????
ಅಗತಾನೇ ದಿನಪತ್ರಿಕೆಯಲ್ಲಿ ಬಂದ ವಿಷಯವೂ ನಮ್ಮನ್ನು ಆಧೀರರನ್ನಾಗಿಸಿತ್ತು, ದುರ್ಬಲ ಅಡಿಪಾಯದಿಂದಾಗಿ ಪಕ್ಕದಲ್ಲಿ ಕಟ್ಟಲು ತೋಡಿದ ಹೊಂಡದಿಂದಾಗಿ ಬಿದ್ದ ಅಪಾರ್ಟ್ಮೆಂಟ್ನ ವಿಷಯವದು.

ಅದೂ ಹೇಳಿ ಕೇಳಿ ಬೆಂಗಳೂರಿನಲ್ಲಿ ಮಳೆಗಾಲ, ರಾತ್ರೆ ಎರಡು ಗಂಟೆಗೂ ದೂರವಾಣಿಯಲ್ಲೇ ಮಲಗಿದಲ್ಲಿಂದ ಎಬ್ಬಿಸುವ ಪಕ್ಕದ ಅಪಾರ್ಟ್ಮೆಂಟ್ ನ ಖಧೀಮರು ನನ್ನನ್ನೂ ನನ್ನ ಕ್ಲೈಂಟ್ ನ್ನೂ ಬಿಟ್ಟಿರಲಿಲ್ಲ, ಅದಕ್ಕಾಗಿ ಅಲ್ಲವಾದರೂ ನಮ್ಮ ನೈತಿಕ ಸ್ರಧ್ಧಾಂತವೂ ಕೂಡಾ ಏನನ್ನದರೂ ಮಾಡಲು ಹೇಳುತ್ತಿತ್ತು, ಅದಕ್ಕಾಗಿ ನಾನೂ ಮತ್ತು ಓನರ್ರೂ ಎಲ್ಲಾ ಕಡೆ ವಿಚಾರಿಸಲು ತೊಡಗಿದೆವು. ಮಳೆರಾಯ ನಮ್ಮ ಮೇಲೆ ವಕೃ ದೃಷ್ಟಿ ಬೀರುವ ಮೊದಲೇ ನಾವು ದಬ ದಬನೆ ಬೀಳುತ್ತಿರುವ ಮಣ್ಣಿಗೆ ಕಡಿವಾಣ ಹಾಕಲೇ ಬೇಕಿತ್ತು.

ಇದಕ್ಕಾಗಿ ನಮಗೆ ಸಲಹೆಗಳು ಎಲ್ಲಾ ದಿಕ್ಕಿನಿಂದ ಬರುತ್ತಿದ್ದು, ಅವುಗಳಲ್ಲಿ ಎರಡು ಸಲಹೆಗಳು ನಮಗೆ ಸರಿಯೆನಿಸಿದವು. ಮೊದಲನೆಯದು ಪೈಪ್ ನೆಯ್ಲಿಂಗ್ ಎರಡನೆಯದು ಸೊಯಿಲ್ ನೆಯ್ಲಿಂಗ್,